ಬದುಕು ಬರಹದಲ್ಲಿ ಕರುಣೆಯ ಕೂಸಿನ ಜೀವನದ ಕಥೆ ಭಾಗ-2
ನೆಚ್ಚಿನ ಓದುಗರೆಲ್ಲರಿಗೂ ನಮಸ್ಕಾರಗಳು
ಪ್ರಿಯ ಓದುಗರೇ ಈಗಾಗಲೇ ಬದುಕು ಬರಹದಲ್ಲಿ ಕೂಸಿನ ಜೀವನದ ಕಥೆ ಭಾಗ-1, ಓದಿದ್ದೀರಿ ಎಂದು ಭಾವಿಸಿ ಆ ಹೆಣ್ಣು ಮಗಳ ಜೀವನದ ಕಥೆಯನ್ನ ಬದುಕು ಬರಹದಲ್ಲಿ ಮುಂದುವರೆಸುತ್ತೇನೆ.
ಆ ಹೆಣ್ಣು ಮಗುವಿಗೆ ಸುಮಾರು ನಾಲ್ಕೈದು ವರ್ಷ ವಯಸ್ಸು . ಗುಳೆ ಹೋದ ತಂದೆ ತಾಯಿ ಮಳೆಗಾಲದಲ್ಲಿ (ಗೂಳೆ ಹೋದ ಪ್ರದೇಶದಲ್ಲಿ ಮಳೆಯ ಕಾರಣ ಕೆಲಸಗಳು ಇರುವುದಿಲ್ಲ) ಮಗಳು ಇರುವ ಮನೆಗೆ ಬಂದು ಸ್ವಲ್ಪ ದಿನದ ಮಟ್ಟಿಗೆ ಇದ್ದು ನೋಡಿಕೊಂಡು ಹೋಗುತ್ತಿರುತ್ತಾರೆ.ಆ ಮಗು ಬಿಟ್ಟು ಹೋದ ಮೊದಲನೆ ವರ್ಷ ತಂದೆ ತಾಯಿ ವಾಪಸ್ ಬಂದಾಗ ತುಂಬಾ ಹರುಷ ಪಡುತ್ತದೆ. ಮತ್ತೆ ಯತಾ ರೀತಿ ಬಿಟ್ಟು ಹೋದಾಗ ಮಗು ಅವರನ್ನ ನೆನೆದು ಅಳುವ ಬದಲು ಮರೆಯಲು ಪ್ರಾರಂಭಿಸುತ್ತದೆ. ಹೀಗೆ ಮುಂದೊಂದು ದಿನ ತಂದೆ ತಾಯಿ ವಾಪಸ್ ಬಂದಾಗ ಮಗುವಿನಲ್ಲಿ ಹರುಷ ಇರುವುದಿಲ್ಲ ಬದಲಾಗಿ ಮಗುವಿನ ಮನಸ್ಸಿನಲ್ಲಿ ತಂದೆ ತಾಯಿ ಬಂಧುಗಳಾಗಿರುತ್ತಾರೆ. ಅಷ್ಟೊಂದು ತಂದೆ ತಾಯಿಯಂತಿರುವ ಅಜ್ಜ ಅಜ್ಜಿನ ಹಚ್ಚಿಕೊಂಡು ಅವರೆ ಎಲ್ಲಾ ಎಂದು ಮನಸ್ಸು ಗಟ್ಟಿ ಮಾಡಿಕೊಂಡಿರುತ್ತದೆ. ಅವಳ ತಮ್ಮ ಸಹ ದೊಡ್ಡವನಾಗಿರುತ್ತಾನೆ. ಆ ತಂದೆ ತಾಯಿ ಮತ್ತೆ ಹೊಟ್ಟೆ ಪಾಡಿಗಾಗಿ ಗೂಳೆ ಹೋಗುವಾಗ ಮಕ್ಕಳು ಶಾಲೆಗೆ ಹೋಗಿ ಶಿಕ್ಷಣ ಪಡೆಯಲಿ ಮಕ್ಕಳು ನಮ್ಮ ಹಾಗೆ ಆಗೋದು ಬೇಡ ಅಂತ ತಿಳಿದು ಮಗನನ್ನು ಸಹ ಹೆಣ್ಣುಮಗಳೊಟ್ಟಿಗೆ ಅಜ್ಜ ಅಜ್ಜಿ ಹತ್ತೀರ ಬಿಟ್ಟು ಹೋಗುತ್ತಾರೆ.
ಆ ತಂದೆ ತಾಯಿಗೂ ಸಹ ನೋವಾಗಿರುತ್ತೆ ಎಲ್ಲವೂ ಅನಿವಾರ್ಯ ಎಂಬಂತೆ ಜೀವನ ಸಾಗುತ್ತಿರುತ್ತದೆ. ಆ ಎರಡು ಮಕ್ಕಳು ಮನೆಯ ಪಕ್ಕದ ಒಂದು ಗುಡಿ(ದೇವಸ್ಥಾನ)ಯಲ್ಲಿ ಅಂಗನವಾಡಿ ಶಾಲೆಗೆ ಹೋಗುತ್ತಿರುತ್ತಾರೆ. ಆಗಿನ ಕಾಲದಲ್ಲಿ ಶಾಲಾ ವ್ಯವಸ್ಥೆಯೇ ಆ ಊರಲ್ಲಿ ಹಾಗಿತ್ತು. ಆ ಪುಟ್ಟ ಬಾಲೆಗೆ ತಮ್ಮ ಅಂದ್ರೆ ತುಂಬಾ ಅಕ್ಕರೆ ಮತ್ತು ಪ್ರೀತಿ, ತಮ್ಮನಿಗೆ ಹೆಸರಿಂದ ಕರೆಯದೆ ಅಪ್ಪಿ ಅಂತಾನೆ ಕರೆಯುತ್ತಿರುತ್ತಾಳೆ. ಆ ಮಕ್ಕಳ ಪೂರ್ವ ಬಾಲ್ಯ ಹೀಗೆ ಸಾಗುತ್ತಾ ಇರುತ್ತದೆ.
ಆ ಹೆಣ್ಣು ಮಗುವಿಗೆ ಐದು ಆರು ವರ್ಷ ಆಗಿರುವಷ್ಟೊತ್ತಿಗೆ ಅವಳ ಮೂರು ಜನ ಮಾವಂದಿರಲ್ಲಿ ದೊಡ್ಡ ಮಾವನ ಮದುವೆ ಸಮಾರಂಭ ಮನೆಯಲ್ಲಿ ತಂದೆ ತಾಯಿ ಸಹ ಬಂದಿರುತ್ತಾರೆ. ಆ ಸಮಯದಲ್ಲಿ ಅಚಾತುರ್ಯ ನಡೆಯದೆ ಹೋದರು ಸಹ ಸುಳಿದು ಹೋಗಿರುತ್ತದೆ. ಅದುವೆ ಆ ಬಾಲೆಗೂ ಅವಳ ಚಿಕ್ಕ ಮಾನವನಿಗೂ ಮದುವೆ ಮಾತು ಆದರೆ ಆ ಮಗುವಿನ ತಂದೆ ಒಪ್ಪುವುದಿಲ್ಲ. ಮಗಳು ಚಿಕ್ಕವಳು ಅಂತಾ ಹಾಗಾಗಿ ಈಗ ಬೇಡ ಅವಳು ಓದಲಿ ಅಂತಾ ಬಿಡುತ್ತಾರೆ.ದೊಡ್ಡ ಮಾವನ ಮದುವೆ ಅಷ್ಟೇ ಆಗುತ್ತೆ ಎಲ್ಲಾ ಸಮಾರಂಭಗಳನ್ನು ಮುಗಿಸಿಕೊಂಡು ಯತಾರೀತಿ ಮಕ್ಕಳನ್ನು ತಾಯಿ ತವರಲ್ಲಿ ಬಿಟ್ಟು ತಂದೆ ತಾಯಿ ಮತ್ತೆ ಗೋವಾ ರಾಜ್ಯಕ್ಕೆ ದುಡಿಯಲು ಹೋಗುತ್ತಾರೆ. ಅವರೊಟ್ಟಿಗೆ ಮಾವನ ಸಂಸಾರವು ಕೂಡಾ ದುಡಿಯಲು ಹೋಗುತ್ತಾರೆ ಕಾರಣ ಮದುವೆಗೆ ಸ್ವಲ್ಪ ಸಾಲ ಆಗಿರುವ ಕಾರಣ ಹೋಗುತ್ತಾರೆ. ಹಾಗೆ ಒಂದು ವರ್ಷ ಕಳೆಯುತ್ತದೆ. ಮಕ್ಕಳು ಸರ್ಕಾರಿ ಶಾಲೆ ಸೇರಿರುತ್ತಾರೆ ಬಾಲ್ಯದಲ್ಲಿ ಮಕ್ಕಳ ಜೀವನ ಚನ್ನಾಗೆ ಸಾಗುತ್ತಾ ಇರುತ್ತದೆ.
ಆ ಹೆಣ್ಣು ಮಗಳು ನಾಲ್ಕನೆಯ ತರಗತಿ ವೇಳೆ ಮಾವನ ಹೆಂಡತಿಗೆ ಒಂದು ಪುಟ್ಟ ಹೆಣ್ಣು ಮಗುವಿನ ಜನನವಾಗುತ್ತದೆ. ಎಲ್ಲರೊಟ್ಟಿಗೆ ಜೀವನ ಸಾಗುತ್ತಾ ಇರುತ್ತದೆ. ತಂದೆ ತಾಯಿ ಬೇರೆ ರಾಜ್ಯದಲ್ಲಿ ಇರುತ್ತಾರೆ. ಇಲ್ಲಿ ಮಾವನ ಹೆಂಡತಿ ಬಂದಮೇಲೆ ಆ ಮಕ್ಕಳಿಗೆ ಅಜ್ಜ ಅಜ್ಜಿ ಮನೆಯಲ್ಲಿ ಜೀವನ ಸ್ವಲ್ಪ ಕಷ್ಟವಾಗಲು ಶುರುವಾಗುತ್ತದೆ. ಅಲ್ಲಿ ತಂದೆ ಕುಡಿಯಲು (ಮದ್ಯಪಾನ) ಕಲಿತಿರುತ್ತಾರೆ. ತಾಯಿಗೆ ಹೊಡೆಯೋದು ಸಹ ಮಾಡುತ್ತಿರುತ್ತಾರೆ. ಇದರಿಂದ ತಂದೆ ತಾಯಿ, ತಂದೆ ಊರಿಗೆ ವಾಪಸ್ಸು ಹೋಗಿ ಅಲ್ಲೆ ಬೇರೆ ಮನೆ ಮಾಡಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಆದರೆ ಆ ಹೆಣ್ಣು ಮಗಳು ಅಜ್ಜ ಅಜ್ಜಿನ ನೆನಸಿ ಹುಷಾರು ಇಲ್ಲದೆ ಮಲಗುತ್ತದೆ. ಆದ ಕಾರಣ ಮತ್ತೆ ಆ ಹೆಣ್ಣು ಮಗು ಹೆತ್ತವರಿಂದ ದೂರಾಗಿ ಬಂಧುಗಳ ಪಾಲಾಗುತ್ತದೆ. (ಮರಳಿ ಅಜ್ಜ ಅಜ್ಜಿ ಮನೆಗೆ ತಂದು ಬಿಟ್ಟು ಹೋಗುತ್ತಾರೆ) ಶಾಲೆ ಮನೆ ಅಂತಾ ಜೀವನ ಸಾಗುತ್ತಾ ಇರುತ್ತದೆ. ಆ ಹೆಣ್ಣು ಮಗುವಿನ ಪಾಲನೆ ಪೋಷಣೆ ವಿಚಾರಕ್ಕೆ ಅಜ್ಜಿ ಮತ್ತು ಮಾವನ ಹೆಂಡತಿಗೂ ಆಗಾಗ ಜಗಳಗಳು ಆಗುತ್ತಿರುತ್ತದೆ. ಆ ಮಗು ತನ್ನ ಕೈಯಲ್ಲಿ ನೀಗುವಷ್ಟು ಮನೆ ಕೆಲಸ ಮಾಡಿ ಶಾಲೆಗೆ ಹೋಗುತ್ತಿರುತ್ತದೆ. 7 ನೇ ತರಗತಿ ಮುಗಿಯುವಷ್ಟರಲ್ಲಿ ಅವಳಿಗೆ ಒಡಹುಟ್ಟಿದವರು 3 ಜನ ಇಬ್ಬರು ತಮ್ಮಂದಿರು ಒಬ್ಬಳು ತಂಗಿ. ಈ ಕಡೆ ಮಾವನಿಗೆ ಮೂರು ಜನ ಹೆಣ್ಣುಮಕ್ಕಳು ಆಗಿರುತ್ತಾರೆ. ಆ ಹೆಣ್ಣು ಮಗು ಚೆನ್ನಾಗಿ ಓದುತ್ತಿರುವುದರಿಂದ ಶಾಲೆಗೆ ಮುಂದೆ ಕಳಿಸಲು ಅಜ್ಜ ಒಪ್ಪುತ್ತಾರೆ. ಅಷ್ಟೊಂದು ತುಂಟತನವಾಗಲಿ, ಚಾಕಚಕ್ಯತೆ ಆಗಲಿ ಆ ಬಾಲೆಯಲ್ಲಿ ಇರೋದಿಲ್ಲ. ಮುಗ್ದತೆ ಜಾಸ್ತಿ ಇರುತ್ತದೆ. ಆ ಮಗು 7ನೇ ತರಗತಿ ಬೋರ್ಡ್ ಎಕ್ಸಾಮ್ ನಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಾಳೆ. ಪೋಷಕರಿಗೂ ಖುಷಿ ಆಗುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕೆ ಊರಿಂದ 2 ಕಿಮೀ ದೂರದಲ್ಲಿರುವ ಒಂದು ಖಾಸಗಿ ಶಾಲೆಯಲ್ಲಿ ದಾಖಲು ಮಾಡುತ್ತಾರೆ. ಆ ಸಂದರ್ಭದಲ್ಲಿ ಅಜ್ಜನ ತಾಯಿ ತೀರಿಹೋಗುತ್ತಾಳೆ. ಆ ಅಜ್ಜನಿಗೆ ಒಬ್ಬಳು ತಂಗಿ ಇರುತ್ತಾಳೆ. ಅಂದರೆ ಅವಳು ಆ ಹೆಣ್ಣು ಮಗಳ ತಾಯಿಯ ಸೋದರತ್ತೆ ಅವಳಿಗಿರುವ ಮಕ್ಕಳಲ್ಲಿ ತನ್ನ ದೊಡ್ಡ ಮಗಳನ್ನ ಅಣ್ಣನ ಮಗನಿಗೆ ತಂದಿಕೋ ಎಂದು ಕೇಳುತ್ತಿರುತ್ತಾಳೆ. ಆ ಉಳಿದ ಇಬ್ಬರು ಮಾವಂದಿರಲ್ಲಿ ಕಿರಿಯ ಮಾವ ಶಾಲೆ ಕಲಿತಿರಲಿಲ್ಲ ಎರಡನೇ ಮಾವ ಐಟಿಐ ಓದಲು ಬೇರೆ ಊರಲ್ಲಿ ಇರುತ್ತಾನೆ. ಆ ಹೆಣ್ಣು ಮಗಳ ತಾಯಿಯ ಸೋದರತ್ತೆ ಮಗಳು ಸಹ ಶಾಲೆ ಕಲಿತಿರುವುದಿಲ್ಲ ಮಗಳು ದೊಡ್ಡವಳಾಗಿರುವ ಕಾರಣ ಅವಳ ಮದುವೆ ಮಾಡಲು ಸಿದ್ಧರಾಗಿರುತ್ತಾರೆ. ಅಜ್ಜನ ತಂಗಿಯ ಬೇಡಿಕೆಯೊಂದಿಗೆ ಆ ಹೆಣ್ಣು ಮಗಳ ಜೀವನ ಕೂಡಾ ಬಾಲ್ಯವಿವಾಹದಿಂದ ಬಲಿಯಾಗುತ್ತದೆ. ಮದುವೆಯ ನಂತರ ಆ ಹೆಣ್ಣು ಮಗಳ ಜೀವನದ ಅಧ್ಯಾಯ ಮುಂದಿನ ಭಾಗದಲ್ಲಿ ಮುಂದುವರಿಯುವುದು.ಧನ್ಯವಾದಗಳು
Tags:
Inytrusts